ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ ಸಂಭ್ರಮ
ಮೈಸೂರು: ಭಾರತದ ಮಹಿಳಾ ಖೋಖೋ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನವದೆಹಲಿಯಲ್ಲಿ ಭಾನುವಾರ ನಡೆದ ಖೋ ಖೋ 2025ರಲ್ಲಿ ಮಹಿಳಾ ತಂಡ ಗೆಲುವು ಸಾಧಿಸಿದ್ದು ಈ ಟೂರ್ನಿಯಲ್ಲಿ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಬಿ ಚೈತ್ರಾ ಭಾಗವಹಿಸಿ ಉತ್ತಮ ಆಟವಾಡಿ ಸಾಧನೆ ಮಾಡಿದ್ದಾಳೆ.
ಪ್ರತಿಷ್ಠಿತ ಟೂರ್ನಿಯಲ್ಲಿ ಕಷ್ಟ ಕಾಪಣ್ಯ ಬದಿಗೊತ್ತಿ, ಸವಾಲು ಎದುರಿಸಿ ಆಟದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರ್ತಿ ಈಗ ಕರ್ನಾಟಕದ ಗಮನ ಸೆಳೆದಿದ್ದಾಳೆ.
ರೈತ ಕುಟುಂಬದಿಂದ ಬಂದ ಚೈತ್ರಾ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದವರು. ಗ್ರಾಮದ ರೈತ ದಂಪತಿ ಬಸವಣ್ಣ ಮತ್ತು ನಾಗರತ್ನ ಅವರ ಹೆಮ್ಮೆಯ ಪುತ್ರಿ. ತನ್ನ ಊರಲ್ಲಿ ಖೋ ಖೋ ಕಲಿತು ಆಡುತಿದ್ದ ಚೈತ್ರಾ ಅದ್ಭುತ ಸಾಧನೆ ಮಾಡಿದ್ದಾರೆ.
ಅವರ ಬಡತನದ ಜೀವನದಲ್ಲಿ ಶಾಲಾ ಶುಲ್ಕ ಪಾವತಿಗೆ ಸಾಧ್ಯವಾಗದ ಪರಿಸ್ಥಿತಿ ಇತ್ತು. ಕಡುಬಡತನದಲ್ಲಿ ಹುಟ್ಟಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಚೈತ್ರಾ ಸಾಧನೆಗೆ ಆಕೆಯ ಹುಟ್ಟೂರಲ್ಲಿ ಸಂಭ್ರಮ ಮನೆ ಮಾಡಿದ್ದು ಆಕೆಯ ಪೋಷಕರನ್ನು ಗ್ರಾಮದಲ್ಲಿ ಸನ್ಮಾನಿಸಿದ್ದಾರೆ.